ದಕ್ಷಿಣ ಗೋವಾ ಜಿಲ್ಲೆಯು ಭಾರತದ ಗೋವಾ ರಾಜ್ಯದ ಎರಡು ಜಿಲ್ಲೆಗಳಲ್ಲಿ ಒಂದಾಗಿದ್ದು, ಕೊಂಕಣ ಪ್ರದೇಶದಲ್ಲಿದೆ. ಉತ್ತರದಲ್ಲಿ ಉತ್ತರ ಗೋವಾ ಜಿಲ್ಲೆ, ದಕ್ಷಿಣ ಮತ್ತು ಪೂರ್ವದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿದೆ. == ಇತಿಹಾಸ == ಪೋರ್ಚುಗೀಸರು ೧೫೧೦ರಲ್ಲಿ ಗೋವಾದಲ್ಲಿ ವಸಾಹತನ್ನು ಸ್ಥಾಪಿಸಿ, ೧೭ ಮತ್ತು ೧೮ನೇ ಶತಮಾನದಲ್ಲಿ ಈಗಿರುವ ಗೋವಾ ರಾಜ್ಯದಷ್ಟು ವಿಸ್ತರಿಸಿದರು. ಭಾರತವು ೧೯ ಡಿಸೆಂಬರ್ ೨೯೬೧ರಲ್ಲಿ ಗೋವಾ ಪೋರ್ಚುಗೀಸರಿಂದ ವಿಮೋಚಿಸಿತು. ಗೋವಾ ಮತ್ತು ಇತರ ಪೋರ್ಚುಗೀಸ್ ವಸಾಹತುಗಳಾದ ದಮನ್ ಮತ್ತು ದಿಯುವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಯಿತು. ೧೯೬೫ರಲ್ಲಿ ಗೋವಾವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೩೦ ಮೇ ೧೯೮೭ರಲ್ಲಿ ಗೋವಾಗೆ ರಾಜ್ಯಪಟ್ಟ ದೊರೆತು, ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಎಂಬ ಎರಡು ಜಿಲ್ಲೆಗಳಾಗಿ ವಿಂಗಡಿಸಲಾಯಿತು. == ಆಡಳಿತ == ದಕ್ಷಿಣ ಗೋವಾದ ಜಿಲ್ಲಾಕೇಂದ್ರವು ಮಡಗಾಂವ್ ಆಗಿದೆ. ಜಿಲ್ಲೆಯಲ್ಲಿ ೭ ತಾಲ್ಲೂಕುಗಳಿದ್ದು, ೨೦೫ ಹಳ್ಳಿಗಳಿವೆ. ತಾಲ್ಲೂಕಿಗೆ ಒಬ್ಬರು ಮಾಮ್ಲಾದಾರ್ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿ ಕಛೇರಿಯಾದ ಮತಾನ್ಹಿ ಸಲ್ದಾನ್ಹಾ ಅಡ್ಮಿನಿಸ್ಟ್ರೇಟಿವ್ ಕಾಂಪ್ಲೆಕ್ಸ್ ನಗರದ ಹೊರವಲಯದಲ್ಲಿರುವ ಇಂಟರ್ಸಿಟಿ ಬಸ್ ನಿಲ್ದಾಣದ ಬಳಿ ಇದೆ. == ವಿಭಾಗಗಳು == ಜಿಲ್ಲೆಯು ಐದು ಉಪವಿಭಾಗಗಳನ್ನು ಒಳಗೊಂಡಿದೆ - ಪೋಂಡ, ಮರ್ಮಗೋವಾ (ವಾಸ್ಕೊ ಡ ಗಾಮ), ಮಡಗಾಂವ್, ಕೆಪೆಂ ಮತ್ತು ಧರ್ಬಂದೋರ. ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ – ಪೋಂಡ, ಮರ್ಮಗೋವಾ, ಸಾಷ್ಟಿ (ಮಡಗಾಂವ್), ಕೆಪೆಂ, ಕಾಣಕೋಣ, ಸಾಂಗೇ ಮತ್ತು ಧರ್ಬಂದೋರ. ಪೋಂಡ ತಾಲ್ಲೂಕನ್ನು ಜನವರಿ ೨೦೧೫ರಲ್ಲಿ ಉತ್ತರ ಗೋವಾದಿಂದ ದಕ್ಷಿಣ ಗೋವಾಗೆ ಸೇರಿಸಲಾಯಿತು. == ಜನಸಂಖ್ಯೆ ಮಾಹಿತಿ == ೨೦೧೧ರ ಜನಗಣತಿಯ ಪ್ರಕಾರ ದಕ್ಷಿಣ ಗೋವಾದ ಜನಸಂಖ್ಯೆಯು ೬೪೦,೫೩೭ ಆಗಿದೆ. ಇದು ಹೆಚ್ಚು ಕಡಿಮೆ ಮಾಂಟೆನೆಗ್ರೊ ದೇಶದಷ್ಟು, ಅಥವಾ ಅಮೆರಿಕದ ವರ್ಮಾಂಟ್ ರಾಜ್ಯದಷ್ಟಿದೆ. ಇದು ಭಾರತದ ಜಿಲ್ಲಾವಾರು ಜನಸಂಖ್ಯೆಯಲ್ಲಿ ೫೧೫ನೇ ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಜನಸಾಂದ್ರತೆಯು ಚ.ಕಿ.ಮಿ. ಗೆ ೩೨೬ ಜನರು ಆಗಿದೆ. ೨೦೦೧-೨೦೧೧ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆ ಪ್ರಮಾಣವು ೮.೬೩% ಆಗಿತ್ತು. ಲಿಂಗಾನುಪಾತವು ೯೮೦ ಆಗಿದೆ (೧,೦೦೦ ಪುರುಷರಿಗೆ ೯೮೦ ಮಹಿಳೆಯರು). ಸಾಕ್ಷರತಾ ಪ್ರಮಾಣವು ೮೫.೫೩% ಆಗಿದೆ. === ಭಾಷೆ === ಕೊಂಕಣಿ ಭಾಷೆಯು ದಕ್ಷಿಣ ಗೋವಾದ ಬಹುತೇಕರ ತಾಯಿನುಡಿಯು ಆಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಭಾಷಿಕರೂ ಇದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಬಹುತೇಕರಿಗೆ ಅರ್ಥವಾಗುತ್ತದೆ. ಪೋರ್ಚುಗೀಸ್ ಭಾಷಿಕರೂ ಕೂಡ ಸ್ವಲ್ಪ ಸಂಖ್ಯೆಯಲ್ಲಿ ಇದ್ದಾರೆ. ಭಾರತದ ೨೦೧೧ರ ಜನಗಣತಿಯ ಪ್ರಕಾರ, ಜಿಲ್ಲೆಯ ೬೬.೪೪% ಜನರು ಕೊಂಕಣಿ, ೧೨.೩೮% ಹಿಂದಿ, ೬.೪೫% ಮರಾಠಿ, ೫.೯೮% ಕನ್ನಡ, ೩.೩೯% ಉರ್ದೂ ಹಾಗೂ ಉಳಿದ ೫.೩೬% ಜನರು ಬೇರೆ ಭಾಷೆಗಳನ್ನು ತಾಯಿನುಡಿಯಾಗಿ ಹೊಂದಿದ್ದಾರೆ. === ಧರ್ಮ === ಹಿಂದೂ ಧರ್ಮವು (೫೩%) ದಕ್ಷಿಣ ಗೋವಾದಲ್ಲಿ ಅತಿಹೆಚ್ಚು ಜನರು ಅನುಸರಿಸುವ ಧರ್ಮವಾಗಿದೆ. ಕ್ರೈಸ್ತರು (೩೬%) ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. == ಶಿಕ್ಷಣ == ದಕ್ಷಿಣ ಗೋವಾದಲ್ಲಿ ಹಲವು ಶೈಕ್ಷಣಿಕ ಸಂಸ್ಥೆಗಳಿವೆ. ಕೆಲ ಪ್ರಮುಖವುಗಳ ಪಟ್ಟಿ- ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್, ಪಿಲಾನಿ – ಗೋವಾ ಕ್ಯಾಂಪಸ್, ಜುವಾರಿನಗರ. ಪಾರ್ವತಿಬಾಯಿ ಚೌಗುಲೆ ಕಾಲೇಜು, ಮಡಗಾಂವ್. ಗೋವಿಂದ್ ರಾಮನಾಥ್ ಕರೆ ಕಾನೂನು ಕಾಲೇಜು, ಮಡಗಾಂವ್. ಪಾದ್ರೆ ಕೊನ್ಸೇಚಾವ್ ಇಂಜಿನಿಯರಿಂಗ್ ಕಾಲೇಜು, ವೆರ್ಣ (ಪಿಸಿಸಿಇ). ಎಂಇಎಸ್ ಕಾಲೇಜು, ವಾಸ್ಕೋ ಡ ಗಾಮ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ದಕ್ಷಿಣ ಗೋವಾ ಜಿಲ್ಲೆಯ ಜಾಲತಾಣ